ರಾಮನಾಥನ್, ಎಸ್ 1917-85. ಭಾರತದ ಪ್ರಖ್ಯಾತ ಸಂಗೀತ ವಿದ್ವಾಂಸರು ಹಾಗೂ ಸಂಗೀತಶಾಸ್ತ್ರಜ್ಞರು. ತಮಿಳುನಾಡಿನ ತಿರುಕೋಯಿಲೂರ್ ಎಂಬಲ್ಲಿ ಜನನ (8 ಏಪ್ರಿಲ್ 1917). ತಂದೆ ಎಂ. ಎಸ್. ಸುಬ್ರಹ್ಮಣ್ಯಶಾಸ್ತ್ರೀ, ಸಂಸ್ಕøತ ವಿದ್ವಾಂಸರು, ತಾಯಿ ಪಟ್ಚಮ್ಮಾಳ್. ರಾಮನಾಥನ್‍ರವರ ತಾಯಿ ಮತ್ತು ತಾತ ಸಂಗೀತ ವಿದ್ವಾಂಸರಾಗಿದ್ದರು. ಇವರ ಪ್ರಭಾವ ಅಣುಗ ರಾಮನಾಥನ್ ಮೇಲೆ ಸಾಕಷ್ಟು ಆಗಿ, ತನ್ನ ಏಳನೆಯ ವಯಸ್ಸಿನಲ್ಲೇ ಸಂಗೀತ ಕಲಿಯಲು ಆರಂಭಿಸಿದರು. ಇವರು 10-12ನೆಯ ವಯಸ್ಸಿನಲ್ಲಿ ತಿರುಕೋಯಿಲೂರ್ ರಾಮುಡು ಭಾಗವತರ್ ಎಂಬವರಲ್ಲಿ ಸಂಗೀತದ ಪ್ರಥಮ ಶಿಕ್ಷಣ ಪಡೆದುಕೊಂಡರು. ಇವರ ಪ್ರೌಢಶಿಕ್ಷಣ ಅಣ್ಣಾಮಲೈ ವಿಶ್ವವಿದ್ಯಾಲಯದಲ್ಲಿ ನಡೆದು (1934-38) ಸಂಗೀತಭೂಷಣ ಪದವಿ ಇವರಿಗೆ ಲಭಿಸಿತು. ಅಲ್ಲಿಯ ಶಿಕ್ಷಣದ ಅವಧಿಯಲ್ಲಿ ತಂಜಾವೂರು ಪೊನ್ನಯ್ಯ ಪಿಳ್ಳೆ ತಿರುವೈಯಾರ್ ಸಭೇಶ ಐಯ್ಯರ್, ಸಾತೂರು ಕೃಷ್ಣ ಐಯಂಗಾರ್, ಮಧುರೆ ಸುಬ್ರಮಣ್ಯ ಐಯ್ಯರ್-ಮುಂತಾದ ಸಂಗೀತವಿದ್ವಾಂಸರ ಸಂಪರ್ಕ ಏರ್ಪಟ್ಟಿತು. ಮುಂದೆ ಟೈಗರ್ ವರದಾಚಾರ್ (1876-1950) ಎಂಬ ಮಹಾವಿದ್ವಾಂಸರ ಬಳಿ ಮೂರು ವರ್ಷಗಳ ಸಂಗೀತಾಭ್ಯಾಸ ನಡೆಸಿದರು. ಇದಾದ ಬಳಿಕ ಪಾಲಾಡಿ ಕೃಷ್ಣೈಯ್ಯರ್ ಮತ್ತು ದೇವಕೋಟ್ಟೈ ನಾರಾಯಣ ಐಯ್ಯಂಗಾರ್ ಎಂಬವರಲ್ಲಿ ತಮ್ಮ ಸಂಗೀತಾಭ್ಯಾಸವನ್ನು ಮುಂದುವರಿಸಿದರು.

ನುರಿತ ವಿದ್ವಾಂಸರಲ್ಲಿ ಸಂಗೀತಾಭ್ಯಾಸ ಮಾಡಿ ರಾಮನಾಥನ್ ಮುಂದೆ ಪುದುಕ್ಕೋಟೆಯ ಒಂದು ಖಾಸಗಿ ಸಂಗೀತಶಾಲೆಯಲ್ಲಿ ಅಧ್ಯಾಪಕ ವೃತ್ತಿ ಕೈಗೊಂಡರು. ಮುಂದೆ ಕಾರೈಕುಡಿ ಸಾಂಬಶಿವ ಐಯ್ಯರ್ ಎಂಬವರ ಪರಿಚಯ ಆಗಿ ಅವರಲ್ಲಿ ವೀಣಾವಾದನವನ್ನು ಕಲಿಯಲು ಆರಂಭಿಸಿ ಬಳಿಕ ದೇವಕೋಟ್ಟೈ ನಾರಾಯಣ ಐಯಂಗಾರ್ ಅವರಲ್ಲಿ ತಮ್ಮ ಸಂಗೀತಾಭ್ಯಾಸವನ್ನು ಮುಂದುವರೆಸಿದರು. ರಾಮನಾಥನ್ ತಮ್ಮ ಸಹೋದರರಾದ ನಟರಾಜನ್ ಅವರೊಂದಿಗೆ ದ್ವಂದ್ವಗಾಯನ ಕಛೇರಿಗಳನ್ನು ನಡೆಸುತ್ತಿದ್ದರಾಗಿ ಈ ಸಹೋದರರಿಗೆ ಪುದುಕ್ಕೋಟೆ ಸಹೋದರರೆಂದೇ ಹೆಸರಾಗಿತ್ತು. ದಕ್ಷಿಣ ಭಾರತದ ದೇವಾಲಯಗಳಲ್ಲಿನ ಕಲಾಕೃತಿಗಳ ಸಂಶೋಧಕರಾಗಿ, ಇವರನ್ನು ತಮಿಳುನಾಡು ಸಂಗೀತನಾಟಕ ಅಕೆಡಮಿ ನೇಮಿಸಿತ್ತು. ದೇವಾಲಯಗಳಿಗೆ ಭೇಟಿ ನೀಡಿ, ವಿಷಯ ಸಂಗ್ರಹಣೆ ಮಾಡಿ ಪ್ರಮುಖ ಓದುವರ್‍ಗಳೊಂದಿಗೆ ಸಂಪರ್ಕ ಬೆಳೆಸಿಕೊಂಡು, ತೇವಾರಮ್ ಮುಂತಾದ ತಮಿಳು ಭಕ್ತಿಸಾಹಿತ್ಯದ ಅಧ್ಯಯನ ಮಾಡಿ ಕಾವಡಿಚಿಂದ್‍ಗಳನ್ನು ಒಳಗೊಂಡು ಒಂದು ಗ್ರಂಥವನ್ನು 1956ರಲ್ಲಿ ರಚಿಸಿದರು. ಅದೇ ವರ್ಷ ಮದರಾಸ್ ಮ್ಯೂಸಿಕ್ ಅಕೆಡಮಿ ನಡೆಸಿದ ಒಂದು ಸಮ್ಮೇಳನದಲ್ಲಿ ಶಿಲಪ್ಪದಿಕಾರಮ್‍ನಲ್ಲಿ ವಿವರಿಸಿರುವ ಸಂಗೀತ ಸಪ್ತಕಗಳು ಎಂಬ ವಿಷಯವಾಗಿ ಪ್ರಬಂಧ ಮಂಡಿಸಿದರು. ಅದು ಮುಂದೆ ಪ್ರಕಟಗೊಂಡಿತು. ಬಳಿಕ ಮದರಾಸಿನ ಕೇಂದ್ರ ಸಂಗೀತ ಕಾಲೇಜಿನಲ್ಲಿ ಅಧ್ಯಾಪನ ವೃತ್ತಿಕೈಗೊಂಡರು. ತಮ್ಮ ಸಹೋದರ ನಟರಾಜನ್ ಹಾಡುವುದನ್ನು ಬಿಟ್ಟು ಪಿಟೀಲುವಾದಕರಾದುದರಿಂದ ರಾಮನಾಥನ್ ತಾವೇ ಗಾಯಕರಾಗಿ ಮುಂದುವರಿಯುವ ಬದಲು ಸಂಗೀತ ಶಾಸ್ತ್ರವೇತ್ತರಾಗಿ ಪ್ರಸಿದ್ಧರಾದರು.

ಪಾಶ್ಚಾತ್ಯ ಬೋಧನಾ ಪದ್ಧತಿಯನ್ನು ರಾಮನಾಥನ್ ಮೆಚ್ಚಿಕೊಂಡು ಅದನ್ನು ಭಾರತದಲ್ಲೂ ಸಂಗೀತ ಬೋಧನೆಗೆ ಅಳವಡಿಸಿಕೊಂಡರು. 1964ರಲಿ ಅಮೆರಿಕ ಸಂಯುಕ್ತ ಸಂಸ್ಥಾನದ ವೆಸ್ಲಿಯನ್ ವಿಶ್ವವಿದ್ಯಾಲಯದಲ್ಲಿ ಸಂಗೀತದ ಅಧ್ಯಾಪಕರಾಗಿ ಸೇವೆ ಸಲ್ಲಿಸಿದರು. ಅಲ್ಲಿಯ ವಾಷಿಂಗ್‍ಟನ್, ಇಲಿನಾಯ್ ವಿಶ್ವವಿದ್ಯಾಲಯಗಳಲ್ಲೂ ಸಂದರ್ಶಕ ಪ್ರಾಧ್ಯಾಪಕರಾಗಿಯೂ ಕೆಲಸಮಾಡಿದರು. ಮತ್ತೆ 1971ರಲ್ಲಿ ವೆಸ್ಲಿಯನ್ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಕೆಲಸ ನಿರ್ವಹಿಸಿದರು. ಶಿಲಪ್ಪದಿಕಾರಮ್‍ನಲ್ಲಿ ಸಂಗೀತವನ್ನು ಕುರಿತಂತೆ ಗ್ರಂಥವೊಂದನ್ನು ಇಂಗ್ಲಿಷಿನಲ್ಲಿ ಸಿದ್ಧಪಡಿಸಿ ಒಪ್ಪಿಸಿದ ಕಾರಣ ಇವರಿಗೆ ವೆಸ್ಲಿಯನ್ ವಿಶ್ವವಿದ್ಯಾಲಯ ಡಾಕ್ಟೊರೇಟ್ ಪದವಿ ನೀಡಿ ಗೌರವಿಸಿತು. ಮುಂದೆ ಟೈವಾನ್, ಮಲೇಷ್ಯಗಳಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಸೇವೆಸಲ್ಲಿಸಿದರು. ಸಂಗೀತದಲ್ಲಿ ಅವಿರತಶ್ರಮ ವಹಿಸಿದ ಇವರ ಕಲಾಸೇವೆಯನ್ನು ಗುರುತಿಸಿ ಭಾರತದ ಅನೇಕ ವಿಶ್ವವಿದ್ಯಾಲಯಗಳು ಇವರ ಸಾಹಚರ್ಯವನ್ನು ಇಟ್ಟುಕೊಳ್ಳುವಂತಾಯಿತು. ಕೇರಳ ವಿಶ್ವವಿದ್ಯಾಲಯದ ಸಂಗೀತಶಾಸ್ತ್ರ ನಿಕಾಯದ ಡೀನ್ ಆಗಿಯೂ ಅನೇಕ ಭಾರತೀಯ ವಿಶ್ವವಿದ್ಯಾಲಯಗಳ ಶಿಕ್ಷಣಮಂಡಲಿಗಳ ಸದಸ್ಯರಾಗಿಯೂ ಇವರು ಸೇವೆ ಸಲ್ಲಿಸಿದರು. ಮದರಾಸ್ ಸಂಗೀತ ಕಾಲೇಜು, ಮಧುರೈ ಸಂಗೀತ ಕಾಲೇಜುಗಳ ಪ್ರಾಂಶುಪಾಲರಾಗಿಯೂ ಮದರಾಸಿನ ತಮಿಳ್ ಇಶೈ ಸಂಘದ ಸಂಶೋಧನ ವಿಭಾಗದ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದರು. ಇವರ ಸಂಗೀತ ಪ್ರೌಢಿಮೆಯನ್ನು ಗುರುತಿಸಿ ಮಧುರೈಯ ಸದ್ಗುರು ಸಮಾಜ ಮಧುರ ಕಲಾಪ್ರವೀಣ (ಇಶೈ ಪೇರರಿಙ್ಞರ್) ಎಂಬ ಬಿರುದನ್ನು ಇತ್ತು ಸನ್ಮಾನಿಸಿತು (1981). ತಿರುವನಂತಪುರದ ಸ್ವಾತಿ ತಿರುನಾಳ್ ಸಂಗೀತ ಸಭೆ ಇವರಿಗೆ ಸ್ವಾತಿ ತಿಲಕಮ್ ಎಂಬ ಬಿರುದನ್ನು ನೀಡಿ ಗೌರವಿಸಿತು (1984). ಮದರಾಸಿನ ಮ್ಯೂಸಿಕ್ ಅಕೆಡಮಿ 1985ರಲ್ಲಿ ಸಂಗೀತ ಕಲಾನಿಧಿ ಎಂಬ ಬಿರುದನ್ನು ಇತ್ತು ಸನ್ಮಾನ ಮಾಡಿತು.

ರಾಮನಾಥನ್ ಸಂಗೀತಕ್ಕೆ ನೀಡಿದ ಕೊಡುಗೆಗಳು ಬಲು ಮೌಲಿಕವಾದವು. ಶ್ಯಾಮಾಶಾಸ್ತ್ರಿಗಳ ಕೃತಿರತ್ನಗಳು. ತ್ಯಾಗರಾಜರ ಪ್ರಹ್ಲಾದ ಭಕ್ತಿವಿಜಯದ 45 ಸ್ವರ ಸಂಯೋಜನೆ ಸಹಿತವಾದ ಕೃತಿಗಳು. ಉತ್ಸವ ಸಂಪ್ರದಾಯದ ದಿವ್ಯನಾಮಕೃತಿಗಳು. ಗೋಪಾಲಕೃಷ್ಣ ಭಾರತಿಯವರ ನಂದನಾರ್ ಚರಿತಂ-ಇವು ರಾಮನಾಥನ್ ಅವರ ಪ್ರಮುಖ ಕೃತಿಗಳು. ವಿದ್ವಾನ್ ಬಿ. ರಾಜಂ ಐಯ್ಯರ್ ಅವರೊಂದಿಗೆ ರಚಿಸಿದ ಸಂಗೀತ ಸಂಪ್ರದಾಯ ಪ್ರದರ್ಶಿನಿ ಎಂಬುದು ಮಹತ್ತ್ವದ ಕೃತಿ. ಖ್ಯಾತ ಸಂಗೀತವಿದ್ವಾಂಸರಾದ ಫಾಲ್‍ಘಾಟ್ ಮಣಿ ಅಯ್ಯರ್ ಅವರ ಪ್ರೇರಣೆಯ ಮೇರೆಗೆ ಅನೇಕ ಸಂಗೀತ ಕಚೇರಿಗಳನ್ನು ನಡೆಸಿಕೊಟ್ಟರು. ಶಾಸ್ತ್ರೀಯವಾದ, ಭಾವಪ್ರಧಾನವಾದ, ಖಚಿತ ಕಾಲಪ್ರಮಾಣವುಳ್ಳ, ಅತ್ಯುತ್ತಮ ಸ್ವರಕಲ್ಪನಾ ಮನೋಧರ್ಮದ, ಇಂಪಿನ ಶಾರೀರದ, ಶ್ರುತಿಶುದ್ಧವಾದ, ಆನಂದದಾಯಕ ಗಾಯನಕ್ಕೆ ರಾಮನಾಥನ್ ಪ್ರಸಿದ್ಧರಾಗಿದ್ದರು. ಮೃದು ಭಾಷಿಗಳೂ ವಿನಯವಂತಿಕೆಯನ್ನು ಮೈಗೂಡಿಸಿಕೊಂಡಿದ್ದವರೂ ಆಗಿದ್ದರು.
ರಾಮನಾಥನ್ 1985ರ ಮಾರ್ಚ್ 19ರಂದು ನಿಧನರಾದರು.				
(ಆರ್.ಎನ್.ಎಸ್.ಆರ್.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ